ಪತ್ತಿನ ಸೇವೆ -
	ಶುಭಾಶುಭಗಳಲ್ಲಿ ಬಟ್ಟೆ ಸುತ್ತಿದ ಎರಡು ಸಣ್ಣ ಕೋಲುಗಳನ್ನು ಎಣ್ಣೆಯಲ್ಲಿ ಅದ್ದಿ ಬೆಂಕಿ ಹೊತ್ತಿಸಿ ಎರಡೂ ಕೈಗಳಲ್ಲಿ ಹಿಡಿದು ನಿವಾಳಿಸುವಂತೆ ನಡೆಸುವ ಒಂದು ಸೇವೆ. ಈ ಸೇವೆ ಮಾಡಿದವರಿಗೆ ಆಕ್ಕಿ ಪಡೆ ಸಿಗುತ್ತದೆ. ಪತ್ತು ಎಂದರೆ ಬಟ್ಟೆ ಸುತ್ತಿದ ಒಂದು ಮರದ ತುಂಡು. ನಿಘಂಟಿನಲ್ಲಿದಕ್ಕೆ ಪಂಜು, ದೀವಟಿಗೆ ಎಂಬ ಅರ್ಥಗಳಿವೆ. ಇದರ ಸುತ್ತಳತೆ ಮೂರು ಸೆಂ.ಮೀ. ಉದ್ದ ಒಂದು ಸೆಂ.ಮೀ. ಅಗಲ ಹೆರೆದ, ಗಟ್ಟಿಯಾದ ಮರದ ಟೊಂಗೆಯೊಂದರಿಂದ ಮಾಡಿದ್ದು ಹಿಡಿಯಭಾಗ ಸ್ವಲ್ಪ ದಪ್ಪವಾಗಿರಬಹುದು. ಅರಳಿ ಬೇವು ಬಿಲ್ವಪತ್ರೆ ಮತ್ತು ಕೊಂಡಬೇವಿನ ಟೊಂಗೆಗಳನ್ನು ಬಳಸುವಂತಿಲ್ಲ. ಈ ಕೋಲಿಗೆ ಸುತ್ತುವ ಬಟ್ಟೆ ಇಂಥದೇ ಬಣ್ಣದ್ದಾಗಿರಬೇಕೆಂಬ ನಿಯಮವಿಲ್ಲ ; ಹೊಸಬಟ್ಟೆಯಾಗಿರಬೇಕೆಂಬ ಕಟ್ಟು ನಿಟ್ಟೂ ಇಲ್ಲ. ಸಾಧಾರಣವಾಗಿ ಚೆನ್ನಾಗಿ ಒಗೆದು ಸ್ವಚ್ಛ ಮಾಡಿದ ಬಿಳಿಯ ಬಟ್ಟೆಯನ್ನು ಬಳಸುತ್ತಾರೆ. ಈ ಸೇವೆಯಲ್ಲಿ ಅಗಸರೆ ಹೆಚ್ಚುಮಂದಿ ಇರುವುದರಿಂದ, ದೇವರಿಗೆ ನಡೆಮುಡಿ ಹಾಸಿ ಹರಿದ ಬಟ್ಟೆಯನ್ನು ಸ್ವಚ್ಛ ಮಾಡಿ ಬಳಸುತ್ತಾರೆ. ಅಗಸರನ್ನು ಬಿಟ್ಟರೆ ಬೆಸ್ತರು ಅಥವಾ ಹರಿಜನರು ಪತ್ತಿನ ಸೇವೆಯಲ್ಲಿ ಭಾಗವಹಿಸುವುದುಂಟು. ಹಿಡಿಯ ಭಾಗವನ್ನು ಬಿಟ್ಟು ಉಳಿದೆಲ್ಲ ಭಾಗಕ್ಕೂ ಏಕರೀತಿಯಲ್ಲಿ ಎಲ್ಲಿಯೂ ಏರುತಗ್ಗಗಳು ಉಂಟಾಗದ ಹಾಗೆ ಗಟ್ಟಿಯಾಗಿ, ಅದರ ಸುತ್ತಳತೆ ಐದರಿಂದ ಆರು ಅಂಗುಲ ಬರುವಂತೆ ಸುತ್ತುತ್ತಾರೆ. ಬಟ್ಟೆ ಗಟ್ಟಿಯಾಗಿ ನಿಲ್ಲಲು ಪ್ರತಿಯೊಂದು ಪದರಕ್ಕೂ ಕುರುಬರು ಕಂಬಳಿಗೆ ಬಳಸುವ ಸರಿಯ ರೀತಿಯ ಗೋಂದನ್ನು ಬಳಸುವುದುಂಟು. ಎರಡು ಕೈಗಳಲ್ಲೂ ಪತ್ತುಗಳನ್ನು ಹಿಡಿಯುವುದು ರೂಢಿ. ಒಂಟಿ ಪತ್ತನ್ನು ಯಾವಾಗಲೂ ಬಳಸುವುದಿಲ್ಲ.

	ಪತ್ತಿಗೆ ಎಣ್ಣೆ ಬಿಡುವ ಎಣ್ಣೆ ಗುಂಬ ಸಾಮಾನ್ಯವಾಗಿ ಮಣ್ಣಿನದು ಅಪರೂಪಕ್ಕೆ ಲೋಹದ್ದೂ ಇರುವುದುಂಟು. ಮದುವೆ ಮನೆಯಲ್ಲಿ ಪತ್ತಿನ ಸೇವೆ ಇದ್ದರೆ ಮದುವೆ ಮನೆಯವರ ಎಣ್ಣೆ ಕೊಡುತ್ತಾರೆ. ದೇವರ ಉತ್ಸವಕ್ಕಾದರೆ ಪತ್ತಿನವನು ಮನೆ ಮನೆ ಎಣಿಸಿ ಊರೊಳಗೆ ಎಣ್ಣೆ ಎತ್ತಿಕೊಳ್ಳಬೇಕಾಗುತ್ತದೆ. ಹರಳೆಣ್ಣೆ ಅಥವಾ ಹಿಪ್ಪೆ ಎಣ್ಣೆ ಬಳಸುವುದು ಸಾಮಾನ್ಯ

	ಮದುವೆಯಲ್ಲಿ ಮದಲಿಂಗಶಾಸ್ತ್ರದ ದಿನ ಗಂಡು ಅಥವಾ ಹೆಣ್ಣು ಶಾಸ್ತ್ರದ ನೀರಿಗೆ ಹೊರಡುವ ಮೊದಲು ಪತ್ತಿನ ಸೇವೆಯಾಗುತ್ತದೆ. ಪತ್ತಿನವನು ಎರಡು ಪತ್ತುಗಳನ್ನು ಹಚ್ಚಿ ಮನೆಬಾಗಿಲಿನ ಹೊರಗೆ ಎದರಾಗಿ ನಿಂತು, ಉರಿಯುವ ಪತ್ತುಗಳನ್ನು ಜೋಡಿಸಿ, ಬಗ್ಗಿ ನೆಲಮಟ್ಟಕ್ಕೆ ಹಿಡಿದು, ನಿಧಾನವಾಗಿ ಎರಡನ್ನೂ ಬೇರೆ ಮಾಡುತ್ತ ಮೇಲಕ್ಕೆ ತಂದು, ಎದ್ದುನಿಂತು ಕೈಮುಗಿಯುವಂತೆ ತನ್ನ ತಲೆಯ ಮುಂಭಾಗದಲ್ಲಿ ಜೋಡಿಸುತ್ತಾನೆ. ಈ ರೀತಿ ನಾಲ್ಕು ದಿಕ್ಕಿಗೂ ದೀಪ ಬೆಳಗುತ್ತಾನೆ. ಉತ್ಸವಕ್ಕೆ, ದೇವರನ್ನು ಹೊರಡಿಸುವಾಗ, ಜಾತ್ರೆಯಲ್ಲಿ ರಥ ಹರಿಯುವುದಕ್ಕೆ ಮೊದಲು, ತಿಥಿಯಲ್ಲಿ ಏರಿಮೇಲೆ ಕೂಳುಹಾಕಿ ನೀರಿಗೆ ತೆಪ್ಪ ಬಿಡುವಲ್ಲಿ ಪತ್ತಿನ ಸೇವೆಯುಂಟು.										(ಎಚ್.ಎಸ್.ಆರ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ